ನಿರಾಶ್ರಿತರು 

	ನಿರಾಶ್ರಿತರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಪ್ರಧಾನ ಕಮಿಷನರ ಕಚೇರಿಯ 1951ರ ಲಿಖಿತ ಶಾಸನ ನೀಡಿರುವ ವ್ಯಾಖ್ಯೆಯ ಪ್ರಕಾರ, ಜನಾಂಗ ಮತ್ತು ರಾಷ್ಟ್ರೀಯತೆ ಒಂದು ನಿರ್ದಿಷ್ಟ ಸಾಮಾಜಿಕ ಸಮೂಹದಲ್ಲಿರುವ ಸದಸ್ಯರಿಂದ ಅಥವಾ ರಾಜಕೀಯ ಅಧಿಕಾರ ವರ್ಗದವರಿಂದ ಕಿರುಕುಳಕ್ಕೆ ಒಳಗಾಗಬಹುದೆಂಬ ಸಾಧಾರವಾದ ಭಯದ ಕಾರಣ ಸ್ವರಾಷ್ಟ್ರದಿಂದ ಹೊರಗಿರುವ ಮತ್ತು ರಾಷ್ಟ್ರ ನೀಡುವ ರಕ್ಷಣಾಸೌಲಭ್ಯವನ್ನು ಪಡೆದುಕೊಳ್ಳಲು ಅಸಮರ್ಥನಾದ ಅಥವಾ ಈ ಭಯದ ಕಾರಣ ಆ ಸೌಲಭ್ಯಕ್ಕೆ ಇಷ್ಟಪಡದ ವ್ಯಕ್ತಿಯೇ ನಿರಾಶ್ರಿತ. ಯೂರೋಪಿನ ವಲಸೆಯ ವಿಚಾರಕ್ಕೆ ಸಂಬಂಧಿಸಿದ್ದ ಅಂತರ ಸರ್ಕಾರಿ ಸಭೆ ನೀಡಿದ (1951) ವ್ಯಾಖ್ಯೆಯಲ್ಲಿ ಇನ್ನೊಂದು ವ್ಯಾಪಕ ಅಂಶವನ್ನು ಸೇರಿಸಲಾಯಿತು. ಅದರ ಪ್ರಕಾರ, ನಿರಾಶ್ರಿತನೆಂದರೆ ತನ್ನ ಜೀವನಸ್ಥಿತಿಗೆ ಬಹುವಾಗಿ ನಷ್ಟವನ್ನುಂಟುಮಾಡಿದ ಯುದ್ಧ ಅಥವಾ ಆಪತ್ತಿಗೆ ತುತ್ತಾದ ವ್ಯಕ್ತಿ ಎಂದರ್ಥವಾಗುತ್ತದೆ. ವಿಲ್ಫನ್‍ರಿಸ್ ಎಂಬ ಇನ್ನೊಬ್ಬ ವಿದ್ವಾಂಸನ ಪ್ರಕಾರ, ತನ್ನ ತಾಯ್ನಾಡಿನಿಂದ ಬಲಾತ್ಕಾರವಾಗಿ ಹೊರದೂಡಲ್ಪಟ್ಟ ಕೃತಕವೊ ಸಾಂಪ್ರದಾಯಿಕವೊ ಆದ ಸರಹದ್ದನ್ನು ದಾಟಿದ ರಕ್ಷಣೆ ಅಥವಾ ಪೋಷಣೆಗಾಗಿ ತನ್ನ ಹಿಂದಿನ ಸರ್ಕಾರಕ್ಕೆ ಬದಲು ಇನ್ನೊಂದು ಸರ್ಕಾರ ಅಥವಾ ಪ್ರಭುವನ್ನು ಆಶ್ರಯಿಸುವ ವ್ಯಕ್ತಿಯೇ ನಿರಾಶ್ರಿತ. ಈ ವ್ಯಾಖ್ಯೆಯಲ್ಲಿ ಮುಖ್ಯವಾಗಿರುವ ಬಲಾತ್ಕಾರವಾಗಿ ಹೊರದೂಡಲ್ಪಟ್ಟ ಎಂಬ ಪದಗಳು ಗಮನಾರ್ಹ. ಜನಸಂಖ್ಯೆ ಹೆಚ್ಚಿದ್ದರಿಂದ ಇಲ್ಲವೆ ಆರ್ಥಿಕ ಮುಗ್ಗಟ್ಟಿನಿಂದ ಹೊರಬರುವವ ನಿರಾಶ್ರಿತನಲ್ಲ. ಮಾಡಿದ ದೊಡ್ಡ ತಪ್ಪಿಗಾಗಿ ದೇಶಭ್ರಷ್ಟನಾದವನೂ ನಿರಾಶ್ರಿತ ಎನಿಸಲಾರ.

	ಮಾನವ ಇತಿಹಾಸ ಹೆಚ್ಚಾಗಿ ಅವನ ಅಲೆದಾಟಗಳ ವೃತ್ತಾಂತವೇ ಆಗಿದೆ. ಐತಿಹಾಸಿಕ ದಾಖಲೆಗಳ ಪುಟಗಳನ್ನು ತಿರುವಿಹಾಕಿದರೆ, ದಾಳಿ, ಯುದ್ಧ ಹಾಗೂ ಆಕ್ರಮಣಗಳ ಫಲವಾಗಿ ಬೃಹತ್ ಪ್ರಮಾಣದಲ್ಲಿ ಮಾನವ ಜನಾಂಗಗಳು ಸ್ಥಳದಿಂದ ಸ್ಥಳಕ್ಕೆ ವಲಸೆ ಹೋಗಿರುವುದನ್ನು ಕಾಣಬಹುದು. ಉದಾಹರಣೆಗೆ, ರೋಮನ್ ಚಕ್ರಾಧಿಪತ್ಯದ ಪತನದ ಅನಂತರ ದಾಳಿಕಾರರ ಆಕ್ರಮಣಗಳ ಕಾರಣ ಸಾವಿರಾರು ಜನ ತಮ್ಮ ತಾಯ್ನಾಡುಗಳಿಂದ ಹೊರದೂಡಲ್ಪಟ್ಟರು. ಒಂದು ಕಾಲದಲ್ಲಿ ಅಧಿಕ ಪರಿಮಾಣದಲ್ಲಿದ್ದ ವಲಸೆಗಳ ಸರಣಿ ಕ್ರಿ.ಶ. ಸುಮಾರು 900ರ ಹೊತ್ತಿಗೆ ಮುಕ್ತಾಯಗೊಂಡು ಯೂರೋಪಿನಲ್ಲಿ ವಲಸೆಯೇ ಇಲ್ಲದ ಶಕೆ ಆರಂಭವಾಯಿತು. ಆದರೆ ಮಧ್ಯೆ ಯುಗದಲ್ಲಿ, ಮುಖ್ಯವಾಗಿ ಮತ ಪರಿಷ್ಕರಣ ಚಳವಳಿಯ ಕಾಲದಲ್ಲಿ, ಮಾನವ ಜನಾಂಗಗಳಿಗೆ ಸಂಬಂಧಿಸಿದ್ದ ನೂತನ ಪ್ರಾದೇಶಿಕ ಚೌಕಟ್ಟು ಸಿದ್ಧವಾದಾಗ, ಧಾರ್ಮಿಕ ಸಮೂಹಗಳನ್ನು ಬಲಾತ್ಕಾರದಿಂದ ದೇಶದಿಂದ ಹೊರದೂಡುವುದು ಅಥವಾ ದೇಶವನ್ನು ತ್ಯಜಿಸಿ ಓಡಿಹೋಗುವಂತೆ ನಿರ್ಬಂಧಪಡಿಸುವುದು ಯೂರೋಪಿನ ಸಾಮಾಜಿಕ ಹಾಗೂ ಆರ್ಥಿಕ ಇತಿಹಾಸದಲ್ಲಿ ನಿರಂತರವಾಗಿ ಕಂಡುಬಂತು. ಉದಾಹರಣೆಗೆ, ಯೆಹೂದ್ಯರನ್ನು ಪಶ್ಚಿಮ ಯೂರೋಪಿನಿಂದ, ಕ್ಯಾತೊಲಿಕರನ್ನು ಪ್ರಾಟೆಸ್ಟಂಟ್ ದೇಶಗಳಿಂದ ಮತ್ತು ಪ್ರಾಟೆಸ್ಟಂಟರನ್ನು ಕ್ಯಾತೊಲಿಕ್ ರಾಜ್ಯಗಳಿಂದ ಹೊರದೂಡಲಾಯಿತು.

	ರಾಜ್ಯಗಳ ಮೇರೆಗಳನ್ನು ಇಂದಿರುವಂತೆ ಸ್ಪಷ್ಟವಾಗಿ ಗುರುತಿಸದೇ ಹಾಗೂ ಜಾಗರೂಕತೆಯಿಂದ ಕಾಪಾಡಲು ಯತ್ನಿಸದೇ ಇದ್ದ ಸಮಯದಲ್ಲಿ, ದೇಶದಿಂದ ದೇಶಕ್ಕೆ ಹೋಗಲು ರಹದಾರಿಗಳು ಅಥವಾ ಪ್ರವೇಶಾಧಿಕಾರ ಪತ್ರಗಳು ಬೇಕಾಗಿರಲಿಲ್ಲ. ಆದ್ದರಿಂದ ನಿರಾಶ್ರಿತರ ಸಮಸ್ಯೆ ಅಂದು ಇಂದಿನಷ್ಟು ಜಟಿಲವಾಗಿರಲಿಲ್ಲ. ಅವರು ಒಂದು ಬೃಹತ್ ಸಮಸ್ಯೆಯಾಗಿರಲಿಲ್ಲ. 19 ಹಾಗೂ 20 ನೆಯ ಶತಮಾನಗಳಲ್ಲಿ ರಾಜ್ಯಗಳ ಸರಹದ್ದುಗಳನ್ನು ಸ್ಪಷ್ಟವಾಗಿ ಗುರುತಿಸುವುದಕ್ಕೆ ಪ್ರಾರಂಭಿಸಿದಾಗ, ತೆರೆದ ಗಡಿನಾಡುಗಳ ಶಕೆ ಅಂತ್ಯಗೊಂಡಿತು. ರಾಷ್ಟ್ರೀಯ ಹಾಗೂ ಜನಾಂಗ ಸಮರೂಪತೆಗೆ ಅತ್ಯಂತ ಹೆಚ್ಚಿನ ಮಹತ್ತ್ವವನ್ನು ಕೊಟ್ಟಿದ್ದರಿಂದ ವಲಸೆಗೆ ಸಂಬಂಧಿಸಿದ್ದ ಅನೇಕ ಸಂಕೀರ್ಣ ನಿರ್ಬಂಧಗಳು ತಲೆ ಎತ್ತಿಕೊಂಡವು. ಈ ನೂತನ ವ್ಯವಸ್ಥೆ ನಿರಾಶ್ರಿತರ ದೊಡ್ಡ ವರ್ಗವೊಂದನ್ನೇ ಸೃಷ್ಟಿಸಿತು. ಅಂಥ ನಿರ್ಭಾಗ್ಯರು ತಾತ್ಕಾಲಿಕ ಒಂದು ಆಶ್ರಯಸ್ಥಾನವನ್ನು ಪಡೆಯುವುದಕ್ಕೆ ಬಹು ಕಷ್ಟ ಕೋಟಲೆಗಳನ್ನು ಎದುರಿಸಬೇಕಾಗಿ ಬಂದಿತು. ಅವರಿಗೆ ಸ್ವರಾಷ್ಟ್ರವಾಸಿಗಳಾಗುವುದು ಕನಸಾಗಿಯೇ ಉಳಿಯಿತು. ಜನಾಂಗಿಕ ಧಾರ್ಮಿಕ ಹಾಗೂ ರಾಜಕೀಯ ಅಲ್ಪಸಂಖ್ಯಾತರು ತಮಗೆ ವಾಸಸ್ಥಳವಾಗಿದ್ದ ದೇಶಗಳಲ್ಲಿ ಬಹು ಪುರಾತನಕಾಲದಿಂದ ಬಾಳುತ್ತಿದ್ದರೂ ಅವುಗಳ ಸಾಂಸ್ಕøತಿಕ ಹಾಗೂ ಸಾಮಾಜಿಕ ರಚನೆಯಲ್ಲಿ ಸಂಪೂರ್ಣವಾಗಿ ಸಮೀಕರಿಸಿಕೊಂಡಿರಲು ಸಿದ್ಧವಾಗಿದ್ದರೂ ಆ ದೇಶಗಳ ಸರ್ಕಾರ ಅಥವಾ ಜನ ತೋರುತ್ತಿದ್ದ ಅಸಹಿಷ್ಣುತೆ ಹಾಗೂ ಭೇದಭಾವ ಮತ್ತು ಕೊಡುತ್ತಿದ್ದ ಕಿರುಕುಳಗಳ ದಳ್ಳುರಿಗೆ ಬೇಡವಾದ ಈ ಜನ ಆಹುತಿಯಾಗಬೇಕಾಯಿತು. ಹಿಟ್ಲರನ ಅಮಾನುಷವಾಗಿದ್ದ ನಿರಂಕುಶಾಧಿಪತ್ಯದಲ್ಲಿ ಆಸ್ತಿ ಹಾಗೂ ಪೌರತ್ವದ ಹಕ್ಕುಗಳನ್ನು ಕಳೆದುಕೊಂಡು ಗಡೀಪಾರಾದ ಅಥವಾ ಸ್ವದೇಶವನ್ನು ಬಿಟ್ಟು ಓಡಿಹೋಗುವ ನಿರ್ಬಂಧಕ್ಕೆ ಒಳಗಾದ ಯೆಹೂದ್ಯರು ಇದಕ್ಕೆ ಉತ್ತಮ ಉದಾಹರಣೆ.

	ಆಧುನಿಕ ಯುಗದಲ್ಲಿ ಪ್ರಪಂಚದ ಎರಡನೆಯ ಮಹಾಯುದ್ಧದ ಕಾಲದಿಂದ ಪ್ರತಿ ಉತ್‍ಪ್ಲವನ ತಲೆದೋರಿದಾಗಲೂ ಅದರ ಫಲವಾಗಿ ದೇಶಭ್ರಷ್ಟರು ಹಾಗೂ ದಿಕ್ಕಿಲ್ಲದವರು ಜಗತ್ತಿನ ರಂಗಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ 20ನೆಯ ಶತಮಾನದ ಪ್ರಥಮಾರ್ಧವನ್ನು ವಿವರಿಸಲು ತಾಯ್ನಾಡುಗಳಿಂದ ಹೊರದೂಡಲ್ಪಟ್ಟವರ ಕಾಲ, ಮನೆ-ಮಠವಿಲ್ಲದೆ ಮಾನವನ ಶತಮಾನ ಎಂಬ ಮುಂತಾದ ಪದಗಳನ್ನು ಬಳಸಬಹುದಾಗಿದೆ. ಅಸಂಖ್ಯಾತ ದೇಶಭ್ರಷ್ಟರಾದ ಹಾಗೂ ದಿಕ್ಕಿಲ್ಲದ ನಿರಾಶ್ರಿತರ ಸಮಸ್ಯೆಗಳು ಪರಿಹರಿಸಲು ಸಾಧ್ಯವಾಗದಷ್ಟರಮಟ್ಟಿಗೆ ಕ್ಲಿಷ್ಟವಾಗಿವೆ ಎಂಬ ಸಾಮಾನ್ಯ ಭಾವನೆ ಸಮರ್ಥನೀಯವಾದುದಲ್ಲ. 1966ರ ವೇಳೆಗೆ ನಿರಾಶ್ರಿತರ ಸಂಖ್ಯೆ ಕಡಿಮೆಯಾಯಿತು ಎಂಬುದು ನಿಜ. 1967ರ ಹಾಗೂ 1970ರ ನಡುವಿನ ವರ್ಷಗಳಲ್ಲಿ ಮತ್ತು ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ಯುದ್ಧದ ಕಾರಣ ಅವರ ಸಂಖ್ಯೆ ಹೆಚ್ಚಿತ್ತಾದರೂ 1971ರ ವೇಳೆಗೆ ಅವರ ಸಂಖ್ಯೆಯಲ್ಲಿ ಸ್ವಲ್ಪ ಇಳಿಮುಖ ಕಂಡುಬಂದಿತೆಂದು ಹೇಳಬಹುದು. ಈ ಲಕ್ಷಾಂತರ ಜನರು ಹಂತಹಂತವಾಗಿ ನಿರಾಶ್ರಿತರಾದವರು.

	ಮುನ್ನಡೆಯಿಡುತ್ತಿದ್ದ ಸೈನ್ಯಗಳನ್ನು ಕಂಡು ಹೆದರಿ ಓಡಿಹೋಗಿ ಅನೇಕರು ನಿರಾಶ್ರಿತರಾದರು. 20ನೆಯ ಶತಮಾನದಲ್ಲಿ ತಲೆದೋರಿದ ಸೈನಿಕ ರಾಜಕೀಯ ಹಾಗೂ ಜನಾಂಗಿಕ ಉಗ್ರಸಂಕ್ಷೋಭೆಗಳು ಈ ಭೂಗ್ರಹದಲ್ಲೆಲ್ಲಾ ಲಕ್ಷಾಂತರ ದೇಶಭ್ರಷ್ಟ ಹಾಗೂ ದಿಕ್ಕಿಲ್ಲದವರು ಗುಂಪುಗುಂಪಾಗಿ ಸಂಚರಿಸುವಂತೆ ಮಾಡಿದವು. ಜಗತ್ತಿನ ಪ್ರಥಮ ಹಾಗೂ ದ್ವಿತೀಯ ಮಹಾಯುದ್ಧ, ಚೀನ-ಜಪಾನ್ ಕಾಳಗ ಹಾಗೂ ಅನಂತರ ತಲೆದೋರಿದ ಪರಿಣಾಮಗಳ ಕಾರಣ ಹಿಂದಿನ ಶತಮಾನಗಳಿಗೆ ಅಪರಿಚಿತವಾಗಿದ್ದ ಜನವಲಸೆ ಹಾಗೂ ಅವರ್ಣನೀಯವಾದಂಥ ಸಂಕಷ್ಟಗಳು ಕಂಡುಬಂದವು. ಕೆಲ ಸಮಯ ಮೇಲೆ ಧಾವಿಸಿಬರುತ್ತಿದ್ದ ದಾಳಿಕಾರ ಸೈನ್ಯದ ಭೀತಿಯಿಂದ ಅಥವಾ ಶತ್ರುಸೈನ್ಯ ಸ್ವದೇಶವನ್ನು ಆಕ್ರಮಿಸಿಕೊಂಡಿದ್ದ ಕಾರಣದಿಂದ ಜನರು ತಮ್ಮ ರಾಷ್ಟ್ರವನ್ನು ಬಿಟ್ಟು ಓಡಿಹೋಗುತ್ತಿದ್ದರು. ಉದಾಹರಣೆಗೆ, ಜರ್ಮನ್ ದಾಳಿಕಾರರು ಧಾವಿಸಿ ಬಂದಾಗ ಬೆಲ್ಜಿಯಂ ದೇಶವಾಸಿಗಳು ಸ್ವರಾಷ್ಟ್ರವನ್ನು ಬಿಟ್ಟು ಓಡಿಹೋದರು. ಆದರೆ ಶಾಂತಿಸ್ಥಾಪನೆಯಾದ ಅನಂತರ ಯುದ್ಧಕಾಲದಲ್ಲಿ ನಿರಾಶ್ರಿತರಾಗಿದ್ದವರು ತಮ್ಮ ದೇಶಕ್ಕೆ ಹಿಂತಿರುಗಿದರು.

	ರಾಜಕೀಯ ದಬ್ಬಾಳಿಕೆಯ ಕಾರಣ ಅನೇಕರು ಸ್ವದೇಶದಿಂದ ಹೊರದೂಡಲ್ಪಟ್ಟು ನಿರಾಶ್ರಿತರಾದರು. ಉದಾಹರಣೆಗೆ, 1922ರ ಸೆಪ್ಟೆಂಬರ್ ತಿಂಗಳಲ್ಲಿ ತುರ್ಕಿಯ ಏಷ್ಯ ಮೈನರ್‍ನಲ್ಲಿ ಗ್ರೀಕ್ ದಾಳಿಕೋರರು ಸೋಲಿನ ಕಹಿಯನ್ನು ಉಣ್ಣಬೇಕಾಗಿ ಬಂದಾಗ, ಅಲ್ಲಿದ್ದ ಅನೇಕ ಗ್ರೀಕರು ಸ್ವದೇಶಕ್ಕೆ ಓಡಿಹೋಗಬೇಕಾಯಿತು. ಅನಂತರ ಗ್ರೀಕರು ಹಾಗೂ ತುರ್ಕರು ಮಾಡಿಕೊಂಡ ಒಪ್ಪಂದದ ಪ್ರಕಾರ, ಏಷ್ಯ ಮೈನರ್‍ನಲ್ಲಿ ಅಳಿದುಳಿದ ಗ್ರೀಕರನ್ನು ಗ್ರೀಸಿಗೂ ಮ್ಯಾಸಿಡೋನಿಯ ಹಾಗೂ ಎಪಿರಿಸ್ ಪ್ರದೇಶಗಳಲ್ಲಿದ್ದ ಅಲ್ಪಸಂಖ್ಯಾತವಾಗಿದ್ದ ತುರ್ಕರನ್ನು ತುರ್ಕಿದೇಶಕ್ಕೂ ಕಡ್ಡಾಯವಾಗಿ ವರ್ಗಾಯಿಸಲಾಯಿತು. ಮುಂದೆ ಮಾಡಲಾದ ಇದೇ ತರಹದ ವ್ಯವಸ್ಥೆಗಳಿಗೆ ಇದು ಮಾದರಿಯಾಗಿ ಪರಿಣಮಿಸಿತು. ಪ್ರಪಂಚದ ದ್ವಿತೀಯ ಮಹಾಯುದ್ಧದ ಅನಂತರ ಬಲ್ಗೇರಿಯ ರೂಮೇನಿಯ ರಷ್ಯ ಬೋಹೀಮಿಯ ಜರ್ಮನಿ ಪೋಲೆಂಡ್ ಹಂಗರಿ ಮುಂತಾದ ರಾಷ್ಟ್ರಗಳ ಪ್ರಜೆಗಳನ್ನು ಇದೇ ರೀತಿ ಪರಸ್ಪರ ವಿನಿಮಯ ಮಾಡಲಾಯಿತು.

	ಆಧುನಿಕ ಕಾಲದಲ್ಲಿ ರಾಜ್ಯಗಳು ತಮಗೆ ವಿರೋಧಿಗಳಾಗಿರುವ ಅಲ್ಪಸಂಖ್ಯಾತರನ್ನು ಸದೆಬಡಿಯುವಷ್ಟು ಪ್ರಬಲವಾದಂದಿನಿಂದ ರಾಜಕೀಯ ಉದ್ದೇಶಗಳಿಂದ ಪ್ರೇರಿತವಾಗಿರುವ ಚಳವಳಿಗಳ ಕಾರಣ ಅನೇಕರು ನಿರಾಶ್ರಿತರಾಗಬೇಕಾಗಿ ಬಂದಿರುವ ಸಂದರ್ಭಗಳು ಕಂಡುಬಂದಿವೆ. ಉದಾಹರಣೆಗೆ, 1917ರ ಅಕ್ಟೋಬರ್ ತಿಂಗಳ ರಷ್ಯ ಕ್ರಾಂತಿ ಮತ್ತು ಕ್ರಾಂತಿಯ ಅನಂತರ ನಡೆದ ಒಳಯುದ್ಧದ ಕಾರಣ ಆಗ ಪ್ರಬಲವಾಗಿದ್ದ ಸರ್ಕಾರವನ್ನು ವಿರೋಧಿಸಿದವರು ಸ್ವದೇಶದಿಂದ ನಿರ್ಗಮಿಸಬೇಕಾಗಿ ಬಂತು. ಫ್ರಾನ್ಸ್ ಜರ್ಮನಿ ಬಾಲ್ಟಿಕ್ ಮುಂತಾದ ದೇಶಗಳಲ್ಲಿ ನೆಲೆಸಿದ್ದ ಅವರು ಕಮ್ಯೂನಿಸ್ಟ್ ಪಕ್ಷದ ಅಧಿಕಾರಕ್ಕೆ ಒಳಗಾಗಿದ್ದ ಸ್ವದೇಶಕ್ಕೆ ಹಿಂತಿರುಗಲು ನಿರಾಕರಿಸಿದರು. ಅದೇ ರೀತಿ ಚೀನ 1956ರಲ್ಲಿ ಟಿಬೆಟನ್ನು ಆಕ್ರಮಿಸಿಕೊಂಡಾಗ, ಬಹುಮಂದಿ ಟಿಬೆಟನರು ನಿರಾಶ್ರಿತರಾಗಿ ಭಾರತ ಭೂತಾನ ಸಿಕ್ಕಿಂ ನೇಪಾಲ ಮುಂತಾದ ದೇಶಗಳಿಗೆ ಪಲಾಯನ ಮಾಡಿದರು.

	ಅನೇಕ ಶತಮಾನಗಳಿಂದ ಮತೀಯ ಹಾಗೂ ಜನಾಂಗಿಕ ಹಾಗೂ ಮತಧರ್ಮದ ಆಧಾರದ ಮೇಲೆ ಹಲವಾರು ಸರ್ಕಾರಗಳು ತಮ್ಮನ್ನು ವಿರೋಧಿಸಿದಂಥ ಅಥವಾ ತಮಗೆ ತಕ್ಕಂತೆ ಹೊಂದಿಕೊಳ್ಳದಂಥ ಸಮೂಹಗಳನ್ನು ಗಡೀಪಾರು ಮಾಡಿರುವ ವಿಷಯಗಳನ್ನು ಇತಿಹಾಸ ದಾಖಲಿಸಿದೆ. ಉದಾಹರಣೆಗೆ, 1492ರಲ್ಲಿ ಸ್ಪೇನ್ ಸರ್ಕಾರ ಅನೇಕ ಯೆಹೂದ್ಯರನ್ನು ತನ್ನ ನೆಲದಲ್ಲಿ ಇರಗೊಡದೆ ಹೊಡೆದೋಡಿಸಿತು. ಅವರು ತುರ್ಕಿ ಹಾಲೆಂಡ್ ಹಾಗೂ ಉತ್ತರ ಆಫ್ರಿಕದಲ್ಲಿ ಆಶ್ರಯಸ್ಥಾನ ಅರಸಿಕೊಂಡು ಅಲೆದಾಡಬೇಕಾಯಿತು. ಯೆಹೂದ್ಯರಿಗೆ ವಿರುದ್ಧವಾಗಿದ್ದ ರಾಜನೀತಿಗಳನ್ನು ಜಾರಿಗೆ ತಂದದ್ದರಿಂದ, ಏಡನ್ ಇರಾಕ್ ಸಿರಿಯಾ ಮುಂತಾದ ರಾಜ್ಯಗಳಲ್ಲಿದ್ದ ಯೆಹೂದ್ಯರು ಇಸ್ರೇಲಿಗೆ ಓಡಿಹೋಗಬೇಕಾಯಿತು.

	ಪ್ರಾದೇಶಿಕ ವಿಭಜನೆಗಳಿಂದಲೂ ಅನೇಕರು ನಿರಾಶ್ರಿತರಾಗಬೇಕಾಯಿತು. ಉದಾಹರಣೆಗೆ 1947ರಲ್ಲಿ ಭಾರತದ ವಿಭಜನೆಯಾದಾಗ ಅನೇಕ ಹಿಂದುಗಳು ಪಾಕಿಸ್ತಾನದಿಂದಲೂ ಮುಸ್ಲಿಮರು ಭಾರತದಿಂದಲೂ ಓಡಿಹೋಗಬೇಕಾಯಿತು. ಮಾನವ ಇತಿಹಾಸದಲ್ಲಿ ಇದು ಜನಸಮೂಹದ ಭಾರಿ ವಲಸೆ. 1971ರಲ್ಲಿ ಬಾಂಗ್ಲಾದೇಶವು ಅಸ್ತಿತ್ವಕ್ಕೆ ಬಂದಾಗ ಸಾವಿರಾರು ಮಂದಿ ನಿರಾಶ್ರಿತರಾದರು. ವಸಾಹತು ಆಳ್ವಿಕೆಗಳ ನಿರ್ಮೂಲನವೂ ಅನೇಕರನ್ನು ನಿರಾಶ್ರಿತರನ್ನಾಗಿಸಿದೆ. ಆಫ್ರಿಕ ಹಾಗೂ ಏಷ್ಯಾ ಖಂಡಗಳಲ್ಲಿದ್ದ ವಸಾಹತುಗಳಲ್ಲಿ ತಲೆ ಎತ್ತಿಕೊಂಡ ಸ್ವತಂತ್ರ ಸರ್ಕಾರಗಳು ಹಳೆಯ ವಸಾಹತು ಆಡಳಿತಗಳ ಸಣ್ಣ ಗುರುತನ್ನು ಅಳಿಸಿಹಾಕುವ ಉದ್ದೇಶದಿಂದ ಕಾರ್ಯೋನ್ಮುಖವಾಗಿದ್ದರಿಂದ ಅಲ್ಲಲ್ಲಿ ನೆಲೆಸಿದ್ದ ಯೂರೋಪಿನ ಜನರ ಪರಿಸ್ಥಿತಿ ಹದಗೆಟ್ಟಿತು. ಅವರು 2ನೆಯ ಅಥವಾ  3ನೆಯ ಪೀಳಿಗೆಗಳಿಗೆ ಸೇರಿದವರಾಗಿದ್ದರೂ ಸ್ಥಳೀಯ ಜೀವನದಲ್ಲಿ ಬೆರೆತು ಹೋಗಿದ್ದರೂ ಅವರನ್ನು ತಮ್ಮವರೆಂದು ಒಪ್ಪಿಕೊಳ್ಳಲು ಆ ಸರ್ಕಾರಗಳು ಸಿದ್ಧವಾಗಿರಲಿಲ್ಲ. ಈಜಿಪ್ಟಿನಿಂದ ಹೊರದೂಡಲಾದ ಸಾವಿರಾರು ಗ್ರೀಕ್ ಹಾಗೂ ಫ್ರೆಂಚ್ ನಿರಾಶ್ರಿತರು ಇದಕ್ಕೆ ಉದಾಹರಣೆ. ಇತ್ತೀಚೆಗೆ ಅನೇಕ ವರ್ಷಗಳಿಂದ ಏಷ್ಯಾ ಹಾಗೂ ಆಫ್ರಿಕ ಖಂಡಗಳ ವಿವಿಧ ರಾಜ್ಯಗಳಲ್ಲಿ ವಾಸಿಸುತ್ತಿರುವ ಭಾರತೀಯರು ತಮ್ಮೆಲ್ಲ ಆಸ್ತಿ-ಪಾಸ್ತಿ, ವ್ಯಾಪಾರ-ವ್ಯವಹಾರಗಳನ್ನೆಲ್ಲ ಬಿಟ್ಟು ಭಾರತಕ್ಕೆ ಹಿಂದಿರುಗಬೇಕು ಎಂಬುದಾಗಿ ನಿರ್ಬಂಧಪಡಿಸಲಾಗುತ್ತಿದೆ. 

	ನಿರಾಶ್ರಿತರ ಸಮಸ್ಯೆಯನ್ನು ಬಗೆಹರಿಸಲು ವಿಶ್ವಸಂಸ್ಥೆ ಹಾಗೂ ವಿವಿಧ ಸರ್ಕಾರಗಳು ಪ್ರಯತ್ನ ನಡೆಸಿವೆ. ಈ ಸಮಸ್ಯೆ ಮಾನವ ಇತಿಹಾಸದಷ್ಟೇ ಪುರಾತನವಾಗಿದ್ದರೂ ರಷ್ಯದ ಕ್ರಾಂತಿಯಾಗುವವರೆಗೆ ಇವರ ಬಗ್ಗೆ ಯಾವ ಅಂತಾರಾಷ್ಟ್ರೀಯ ನಿರ್ಣಯವನ್ನೂ ಕೈಗೊಂಡಿರಲಿಲ್ಲ. ಪ್ರಪಂಚದ ಪ್ರಥಮ ಮಹಾಯುದ್ಧದ ಅನಂತರ ಸ್ಥಾಪಿತವಾಗಿದ್ದ ಲೀಗ್ ಆಫ್ ನೇಷನ್ಸ್ ಎಂಬ ರಾಷ್ಟ್ರಗಳ ಸಂಘ 1921ರಲ್ಲಿ ರಷ್ಯ ಹಾಗೂ ಆರ್ಮೀನಿಯಾದ ನಿರಾಶ್ರಿತರ ವಿಷಯಗಳನ್ನು ನೋಡಿಕೊಳ್ಳುವುದಕ್ಕಾಗಿ ನಾರ್ವೆಯ ನಾಸೆನ್ ಎಂಬವರನ್ನು ಪ್ರಧಾನ ಕಮಿಷನ್ನರನ್ನಾಗಿ ನೇಮಿಸಿತು. ಅನಂತರ ನಾಟ್ಸಿ ಪಕ್ಷ ಇತರ ಜನಾಂಗಗಳಿಗೆ ಕೊಟ್ಟ ಅಮಾನುಷ ಕಿರುಕುಳದ ಪರಿಣಾಮವಾಗಿ ನಿರಾಶ್ರಿತರಾಗಿದ್ದ ಜರ್ಮನಿಯ ಯೆಹೂದ್ಯರು ಹಾಗೂ ಇತರರಿಗಾಗಿ 1933ರಲ್ಲಿ ಜೇಮ್ಸ್ ಜಿ. ಮ್ಯಾಕ್‍ಡೋನಾಲ್ಡ್ ಎಂಬವರನ್ನು ನೇಮಕ ಮಾಡಲಾಯಿತು. ಆದರೆ ಇತರರು ಸಹಕರಿಸದೇ ಇದ್ದ ಕಾರಣ ಎರಡೇ ವರ್ಷಗಳಲ್ಲಿ ಅವರು ತಮ್ಮ ಪದವಿಗೆ ರಾಜೀನಾಮೆ ನೀಡಿದರು. ಆಮೇಲೆ ಅವರವರ ತಾಯ್ನಾಡುಗಳಿಗೆ ಮರಳಿ ಹೋಗದ ನಿರಾಶ್ರಿತರಿಗಾಗಿ ಹೊಸ ವಾಸಸ್ಥಳಗಳನ್ನು ಏರ್ಪಡಿಸುವುದಕ್ಕಾಗಿ ಅಂತರ ಸರ್ಕಾರ ಸಭೆಯೊಂದು ತಲೆದೋರಿತು. ಆದರೆ ಈ ಎಲ್ಲ ಪ್ರಯತ್ನಗಳು ಬಂಡೆಗಳ ಮೇಲೆ ಬಿದ್ದ ಮಳೆ ನೀರಿನಂತೆ ನಿಷ್ಫಲವಾದವು. 1947ರಲ್ಲಿ ಅಂತಾರಾಷ್ಟ್ರೀಯ ನಿರಾಶ್ರಿತರ ವ್ಯವಸ್ಥೆ ಎಂಬ ವಿಶ್ವಸಂಸ್ಥೆಯ ಹಂಗಾಮಿ ವಿಶೇಷ ಸಂಘವೊಂದನ್ನು ಸ್ಥಾಪಿಸಲಾಯಿತು. ಅನಂತರ 1950ರಲ್ಲಿ ನಿರಾಶ್ರಿತರ ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನು ಕಂಡುಹಿಡಿಯುವುದಕ್ಕಾಗಿ ಅವರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಪ್ರಧಾನ ಕಮಿಷನರ್ ಕಚೇರಿಯನ್ನು ವ್ಯವಸ್ಥಿತಗೊಳಿಸಲಾಯಿತು. ನಿರಾಶ್ರಿತನ ಇಚ್ಛೆಗೆ ವಿರುದ್ಧವಾಗಿ ಅವನನ್ನು ಅವನ ಸ್ವದೇಶಕ್ಕೆ ಹಿಂದುರುಗಿ ಹೋಗುವಂತೆ ಮಾಡುವುದಿಲ್ಲ ಎಂಬುದಾಗಿ ಭರವಸೆ ಕೊಡುವುದರ ಮೂಲಕ ಈ ವ್ಯವಸ್ಥೆ ತಾನೇ ಸ್ವಇಚ್ಛೆಯಿಂದ ಹಿಂದುರುಗಿ ಹೋಗುವುದಕ್ಕೆ ಅಥವಾ ಮೊಟ್ಟಮೊದಲು ಆಶ್ರಯ ನೀಡಿದ ದೇಶದಲ್ಲೇ ಖಾಯಂ ಆಗಿ ನೆಲೆಸಲು ಅಥವಾ ಆಯಾಯ ಸರ್ಕಾರಗಳು ನೀಡಬಹುದಾದ ಸೌಲಭ್ಯಗಳಿಗನುಸಾರವಾಗಿ ಇನ್ನಾವುದಾದರೂ ದೇಶದಲ್ಲಿ ನೆಲೆಸಲು ಅವನಿಗೆ ಅವಕಾಶ ಮಾಡಿಕೊಟ್ಟಿತು. ಈ ವ್ಯವಸ್ಥೆಗಳಲ್ಲದೇ ಅನೇಕ ಸ್ಥಳೀಯ ಸಂಘಗಳೂ ತಲೆಎತ್ತಿಕೊಂಡಿವೆ. ಉದಾಹರಣೆಗೆ ಪಾಲ್ಟೈನಿಂದ ಬಂದ ಅರಬ್ಬಿ ನಿರಾಶ್ರಿತರ ಯೋಗಕ್ಷೇಮವನ್ನು ನೋಡಿಕೊಳ್ಳುವುದಕ್ಕಾಗಿ ವಿಶ್ವಸಂಸ್ಥೆ 1949ರಲ್ಲಿ ಪರಿಹಾರ ಸಂಘವೊಂದನ್ನು ಸ್ಥಾಪಿಸಿತು.

	ಇಷ್ಟು ಮಾತ್ರವಲ್ಲದೇ  ಇತ್ತೀಚಿನ ವರ್ಷಗಳಲ್ಲಿ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ವಸಹಾಯಕ ಸಂಘಗಳೂ ನಿರಾಶ್ರಿತರ ಒಳಿತಿಗಾಗಿ ದುಡಿಯುತ್ತಿವೆ. ಇವನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು: 1 ತಮ್ಮ ಮತಗಳಿಗೆ ಸೇರಿದ ನಿರಾಶ್ರಿತರಿಗೆ ಮಾತ್ರ ಸಹಾಯ ಮಾಡುವ ರಾಷ್ಟ್ರೀಯ ಕ್ಯಾತೋಲಿಕ್ ಕಲ್ಯಾಣ ಸಂಘ. ಯೆಹೂದ್ಯ ವಲಸೆಗಾರರ ಸಹಾಯಕ ಸಮಾಜದಂಥ ನಿರ್ದಿಷ್ಟ ನಾಮಗಳನ್ನುಳ್ಳ ವ್ಯವಸ್ಥೆಗಳು. 2 ಅಂತಾರಾಷ್ಟ್ರೀಯ ರೆಡ್‍ಕ್ರಾಸ್ ಸಂಸ್ಥೆ. ಅಂತಾರಾಷ್ಟ್ರೀಯ ರಕ್ಷಣಾ ಸಮಿತಿ ಮುಂತಾದ ನಿರ್ದಿಷ್ಟ ಹೆಸರುಗಳನ್ನು ಹೊಂದಿರದ ವಿಶ್ವವ್ಯಾಪಿ ಸಂಸ್ಥೆಗಳು ಮತ್ತು 3 ಪ್ರತ್ಯೇಕವಾಗಿ ಸ್ಥಳೀಯ ನಿರಾಶ್ರಿತರಿಗಾಗಿ ಕೆಲಸ ಮಾಡುವ ಅನೇಕ ಖಾಸಗಿ ಸಂಘಗಳು. ಇಷ್ಟೆಲ್ಲ ಕ್ರಮಗಳನ್ನು ಕೈಗೊಂಡಿದ್ದರೂ ಉಳಿದಿರುವ ದೇಶ ಭ್ರಷ್ಟ ನಿರಾಶ್ರಿತರ ಸ್ಥಿತಿ ಶೋಚನೀಯವಾಗಿಯೇ ಇದೆ.
(ಎಂ.ಬಿ.ಆರ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ